 ಎಡೆಸ್ಸ		
	ಈ ಹೆಸರಿನ ಎರಡು ನಗರಗಳಿವೆ. 1. ಮ್ಯಾಸಿಡೋನಿಯದ ಪ್ರಾಚೀನ ರಾಜಧಾನಿಯಾದ ಎಡೆಸ್ಸ ಆ ರಾಜ್ಯದ ಪೆಲ್ಲಾ ಪ್ರಾಂತ್ಯದ ಪ್ರಮುಖ ನಗರ. ಎಡೆಸ್ಸ ನಗರ ಮತ್ತು ಪೆಲ್ಲಾ ಪ್ರಾಂತ್ಯದ ಪೆಲ್ಲಾ ನಗರ - ಇವುಗಳಿಗೆ ಸೇರಿದ ಕ್ರೈಸ್ತ ಧರ್ಮಾಧಿಕಾರಿಯ ಪೀಠ ಈ ನಗರದಲ್ಲಿದೆ. ಸಲೋಂಕಿಯ-ಬಿಟೋಲ ರೈಲುಮಾರ್ಗದಲ್ಲಿ ಸಲೋಂಕಿಯಕ್ಕೆ ಪಶ್ಚಿಮ ಉತ್ತರ-ಪಶ್ಚಿಮದಲ್ಲಿ 111 ಕಿ.ಮೀ. ದೂರದಲ್ಲಿದೆ. ನಗರ ಲೂಧಿಯಾಸ್ ನದೀಕಣಿವೆಯ ಮೇಲ್ಭಾಗದಲ್ಲಿರುವ ಕಲ್ಲುಗುಡ್ಡವೊಂದರ ಮೇಲಿದೆ. ಇಲ್ಲಿ ಉಪವನಗಳು ಮತ್ತು ದ್ರಾಕ್ಷಿ ತೋಟಗಳು ಹೇರಳವಾಗಿರುವುದರಿಂದ ಹಿಂದೆ ಇದಕ್ಕೆ ಮೈದಾಸನ ತೋಟ ಎಂಬ ಹೆಸರು ಬಂದಿತ್ತು. ಗುಡ್ಡದ ಮೇಲಿಂದ ನಗರದ ಪೂರ್ವಭಾಗದಲ್ಲಿರುವ ಬಯಲು ಪ್ರದೇಶಕ್ಕೆ ಹರಿದು ಬರುವ ಝರಿಗಳ ರಮಣಿಯತೆ ಮತ್ತು ಜಲಸಮೃದ್ಧಿಯಿಂದಾಗಿ ಇದಕ್ಕೆ ಮಧ್ಯಯುಗದಲ್ಲಿ ಪೊಡೆನ ಎಂಬ ಹೆಸರು ಬಳಕೆಯಲ್ಲಿತ್ತು. (ಸ್ಲವೋನಿಕ್ ಭಾಷೆಯಲ್ಲಿ ವೊಡ ಎಂದರೆ ನೀರು ಎಂದು ಅರ್ಥ). ಇದು ರಗ್ಗು, ಕಂಬಳಿ ಮುಂತಾದ ಜವಳಿ ಉದ್ಯಮದ ಕೇಂದ್ರವಾಗಿದೆ. ವ್ಯವಸಾಯ ಪ್ರಧಾನವಾದ ಪ್ರದೇಶವೂ ಹೌದು. ವಿಶೇಷವಾಗಿ ಹೊಗೆಸೊಪ್ಪು, ಗೋದಿ, ದ್ರಾಕ್ಷಿ ಮತ್ತಿತರ ಹಣ್ಣುಗಳನ್ನು ಬೆಳೆಯುತ್ತಾರೆ. ಹತ್ತಿ ಮತ್ತು ರೇಷ್ಮೆವಸ್ತ್ರಗಳ ಹಾಗೂ ಹಲವು ಬಗೆಯ ಆಹಾರವಸ್ತುಗಳ ಉತ್ಪಾದನೆ ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಹೀಗಾಗಿ, ಇದು ಪ್ರಮುಖ ಮಾರುಕಟ್ಟೆಯೂ ಆಗಿದೆ. 1952ರಲ್ಲಿ ಇದರ ಜನಸಂಖ್ಯೆ 15,500 ಆಗಿತ್ತು.

ಈ ನಗರಕ್ಕೆ ಏಗೆ ಎಂಬ ಹೆಸರಿತ್ತು ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ಪ್ರಾಚೀನ ಏಗೆನಗರ ಬಹುಶಃ ಆ ಸ್ಥಳದಲ್ಲಿಯೇ ಇದ್ದಿರಬೇಕೆಂದು ಹೇಳಲಾಗಿದೆ. ಕ್ರಿ.ಪೂ. ಐದನೆಯ ಶತಮಾನದಲ್ಲಿ ರಾಜಧಾನಿಯನ್ನು ಜಿಲ್ಲಾಕ್ಕೆ ವರ್ಗಾಯಿಸಿದಾಗಲೂ ಈ ನಗರ ಮ್ಯಾಸಿಡೋನಿಯಾದ ರಾಜರ ಸಾಂಪ್ರದಾಯಿಕ ಕೇಂದ್ರವಾಗಿ ಉಳಿಯಿತು. ಇದು ಈ ರಾಜರ ಸಮಾಧಿಸ್ಥಳ ಅಥವಾ ರುದ್ರಭೂಮಿಯೂ ಹೌದು. ಕ್ರಿ.ಪೂ. 336ರಲ್ಲಿ ಎರಡನೆಯ ಫಿಲಿಫ್ಪನನ್ನು ಕೊಲೆ ಮಾಡಲಾಯಿತು. ರೋಮನ್ನರ ಕಾಲದಲ್ಲಿ ವಿಯ ಎಗ್ನೇಷಿಯದ ರಂಗಭೂಮಿಗಳಲ್ಲೊಂದು ಈ ನಗರದಲ್ಲಿ ನೆಲೆಗೊಂಡಿತ್ತು. ಮುಂದೆ ಬಲ್ಗೇರಿಯನ್ನರೂ, ಬಿeóÁನ್‍ಟಿಯನ್ನರು ಇದರ ಸಂಪತ್ತನ್ನು ಹಂಚಿಕೊಂಡರು. ಅನಂತರ 13ನೆಯ ಶತಮಾನದಲ್ಲಿ ಬಿeóÁನ್‍ಟಿಯಂ ವಿರೋಧಿ ರಾಜ್ಯಗಳಾದ ಥೆಸ್ಸಾಲೋನಿಕ ಮತ್ತು ನಿಕಾಯಿ ರಾಜ್ಯಗಳು ಮತ್ತೆ ಇದರ ಸಂಪತ್ತನ್ನು ಹಂಚಿಕೊಂಡುವು. 14ನೆಯ ಶತಮಾನದಲ್ಲಿ ಇದು ಸರ್ಬಿಯನ್ನರ ವಶವಾಯಿತು. 1349ರಲ್ಲಿ ಆರನೆಯ ಜಾನ್ ಕ್ಯಾಂಟ ಕ್ಯೂಜೆನಸ್ ಇದನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದ್ದ. ಮುಂದೆ ಇದು ತುರುಷ್ಕರ ವಶವಾಯಿತು. 1912ರ ಅಕ್ಟೋಬರಿನಲ್ಲಿ ಇದು ಗ್ರೀಕ್ ಸಾಮ್ರಾಜಕ್ಕೆ ಸೇರಿಹೋಯಿತು. ದ್ವಿತೀಯ ವಿಶ್ವಯುದ್ಧದಲ್ಲಿ ಜರ್ಮನ್ ಪಡೆಗಳು ಈ ನಗರವನ್ನು ಅಕ್ರಮಿಸಿಕೊಂಡಿದ್ದುವು. ಅನಂತರ ನಡೆದ ಅಂತರ್ಯುದ್ಧಕ್ಕೂ ಇದೇ ಹೋರಾಟದ ಕಣವಾಗಿತ್ತು.

2. ಸಿರಿಯ ಪ್ರಸ್ಥಭೂಮಿಯ ಉತ್ತರದ ಅಂಚಿನಲ್ಲಿರುವ ಪ್ರಾಚೀನ ನಗರ. ಮ್ಯಾಸಿಡೋನಿಯದ ಪ್ರಾಚೀನ ನಗರದ ಹೆಸರನ್ನೇ ಈ ನಗರಕ್ಕೂ ಇಡಲಾಯಿತು. ಅಲ್ಲಿಂದ ಬಂದ ವಲಸೆಗಾರರು ಇಲ್ಲಿ ನೆಲೆಸಿದುದೇ ಇದಕ್ಕೆ ಕಾರಣ. ಈ ಪ್ರದೇಶವೇ ಇಂದು ಉರ್ಫ ನಗರವಾಗಿ ಮಾರ್ಪಟ್ಟಿದೆ. ಇದು ಜೆರೂಸಲೆಮ್‍ಗೆ 430 ಮೈಲಿಗಳ ದೂರದಲ್ಲಿ, ಈಶಾನ್ಯದಲ್ಲಿ ಸ್ವಲ್ಪ ಉತ್ತರದಲ್ಲಿದೆ. ಮೊದಲಿಗೆ ಬಳಕೆಯಲ್ಲಿದ್ದ ಉರ್ಹಾಯಿ ಎಂಬ ಅರಾಮೇಯಿ ಶಬ್ದವೇ ಅದರ ಹಿಂದಿನ ಹೆಸರಿಗೆ ಮೂಲ. ಮೊದಲನೆಯ ಸೆಲ್ಯೂಕಸ್ ಬಹುಶಃ ಕ್ರಿ.ಶ. ಮೂರನೆಯ ಶತಮಾನದ ಮೊದಲಲ್ಲಿ ಎಡೆಸ್ಸ ನಗರವನ್ನು ಪುನರ್‍ನಿರ್ಮಿಸಿದಾಗ ಆ ಹೊಸ ನಗರಕ್ಕೆ ಹೊಸ ಹೆಸರಿಡಲಾಯಿತು. ನಗರದ ಪ್ರಾಚೀನ ಇತಿಹಾಸಕ್ಕೆ ಸಂಬಂಧಿಸಿದ ಪುರಾವೆಗಳಲ್ಲಿ ಒಂದೆಂಡೆ ಕ್ರೂರಿ ರಾಜನಾದ ನಿಮ್ರೋದನ ಕಥೆಗಳೂ ಮುಸ್ಲಿಂ ಪ್ರವಾದಿ ಏಬ್ರಹಾಮನ ಉಲ್ಲೇಖಗಳೂ ಕಾಣದೊರೆಯುತ್ತವೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಇದು ಏಬ್ರಹಾಮ್ ಹುಟ್ಟಿದ ಊರು. ಇಂದಿಗೂ ಗುಹೆಯೊಂದನ್ನು ತೋರಿಸಿ ಇಲ್ಲಿ ಏಬ್ರಹಾಮ್ ಹುಟ್ಟಿದನೆಂದು ಹೇಳುತ್ತಾರೆ. ನಗರದ ಅವಶೇಷಗಳಲ್ಲಿರುವ ಕಡಿದಾದ ಚಾಚುಕಲ್ಲೊಂದನ್ನು ತೋರಿಸಿ, ನಿಮ್ರೋದ್ ಏಬ್ರಹಾಮನು ಇಲ್ಲಿಂದ ತಳ್ಳಿಸಿಕೊಂದಿದ್ದನೆಂದು ಹೇಳುತ್ತಾರೆ. ಸೆಲ್ಯೂಕಸ್ ಈ ನಗರವನ್ನು ಪುನರ್ ನಿರ್ಮಿಸುವುದಕ್ಕೆ ಮುಂಚೆ ಇದು ಅಟರ್‍ಗಾಟಿಸ್ ಎಂಬ ಸಿರಿಯನ್ ದೇವತೆಯ ಉಪಾಸನಾ ಕೇಂದ್ರವಾಗಿತ್ತೆಂಬುದಕ್ಕೆ ಆಧಾರಗಳಿವೆ. ಆಕೆಯ ಉಪಾಸನೆಗೆ ಸಂಬಂಧಿಸಿದ ಸಿಹಿನೀರು ಮೀನುಗಳ ಕೊಳವೊಂದಿದೆ. ಈ ಕೊಳದ ಮೀನುಗಳನ್ನು ಅತ್ಯಂತ ಪವಿತ್ರವಾದುದೆಂದು ಭಾವಿಸಲಾಗಿದೆ.

ಗ್ರೀಕರು ಪರ್ಷಿಯವನ್ನು ಗೆದ್ದ ಅವಧಿಯಲ್ಲಿ ಇದು ಮೊದಲ ಬಾರಿಗೆ ಐತಿಹಾಸಿಕವಾಗಿ ಪ್ರಮುಖಸ್ಥಾನ ಗಳಿಸಿತು. ಕ್ರಿ.ಪೂ. 137 ರಿಂದ ಕ್ರಿ.ಶ. 216ರ ವರೆಗೆ ಇದು ಸ್ವತಂತ್ರ ಓಸ್ರೋನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಕ್ರಿ.ಶ. 217ರಲ್ಲಿ ಇದು ರೋಮನ್ನರ ಕೈವಶವಾಯಿತು. ಆದರೆ ಸಂಪೂರ್ಣವಾಗಿ ಹೆಲೆನೀಕರಣಕ್ಕೆ ಒಳಗಾಗಲಿಲ್ಲ. ಸಿರಿಯನ್ ಭಾಷೆಯ ಪ್ರಮುಖ ಅಧ್ಯಯನ ಕೇಂದ್ರವಾಯಿತು. ಉತ್ತರ ಮೆಸಪೊಟೇಮಿಯ ಮತ್ತು ಮೆಡಿಟರೇನಿಯನ್ ವಲಯದಲ್ಲಿ ಇದ್ದುದರಿಂದ ಈ ನಗರ ಪಾರ್ಥಿಯ ಮತ್ತು ರೋಮ್‍ಗಳ ನಡುವಣ ಕದನದ ಕಣವಾಯಿತು. ಮುಂದೆ ಕ್ರಿ.ಶ. 609ರಲ್ಲಿ ಪರ್ಷಿಯನ್ನರು ಮತ್ತು ಕ್ರಿ.ಶ. 641ರಲ್ಲಿ ಮುಸಲ್ಮಾನರು ಈ ನಗರದ ಮೇಲೆ ಅಧಿಕಾರ ಹೊಂದಿದ್ದರು. ಗಾಡ್‍ಫ್ರೇ ಬೋಯಿಲೋನನ ನೇತೃತ್ವದಲ್ಲಿ ಧರ್ಮಯುದ್ಧ ನಡೆಸಿದ ಧರ್ಮಯೋಧರು 1097ರಲ್ಲಿ ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಕ್ರಿ.ಶ. 1144ರಲ್ಲಿ 25 ದಿನಗಳ ಕಾಲ ಮುತ್ತಿಗೆ ಹಾಕಿ ಮುಸ್ಲಿಮರು ಈ ನಗರವನ್ನು ಮತ್ತೆ ವಶಪಡಿಸಿಕೊಂಡರು. ಮುಂದೆ ಈಜಿಪ್ಷಿಯನ್ನರು, ಬಿeóÁನ್‍ಟಿಯನ್ನರು, ಮಂಗೋಲರು, ತುರ್ಕೋಮನ್ನರು ಮತ್ತು ಪರ್ಷಿಯನ್ನರ ಕೈದಾಟಿ ಕೊನೆಗೆ ಕ್ರಿ.ಶ.1637ರಲ್ಲಿ ಇದು ತುರ್ಕಿಸ್ಥಾನದ ವಶವಾಯಿತು. ಬಹಳ ಮುಂಚಿತವಾಗಿಯೇ ಅಂದರೆ ಕ್ರಿ.ಶ. ಸುಮಾರು 150ರ ಹೊತ್ತಿಗೆ ಕ್ರೈಸ್ತಧರ್ಮ ಇಲ್ಲಿ ಬೇರು ಬಿಟ್ಟಿತ್ತು. ರಾಜ ಅಬ್ಗರ್ ಮತ್ತು ಕ್ರಿಸ್ತನ ನಡುವೆ ನಡೆದಿದ್ದಿತೆಂದು ಹೇಳಲಾದ ಪತ್ರವ್ಯವಹಾರವನ್ನು ಯೂಸೇಬೆಯಸ್ ಎಂಬುವರು ಪತ್ತೆಹಚ್ಚಿದ್ದಾರೆ. ಕ್ರಿ.ಶ.4ನೆಯ ಶತಮಾನದಿಂದ ಹಿಡಿದು ಇಸ್ಲಾಂ ಧರ್ಮ ತಲೆಯೆತ್ತುವವರೆಗೆ ಈ ನಗರ ಸಿರಿಯನ್ ಭಾಷೆಯ ಮತ್ತು ಕ್ರೈಸ್ತಧರ್ಮದ ಅಧ್ಯಯನಕ್ಕೆ ಮುಖ್ಯವಾದ ಕೇಂದ್ರವಾಗಿ ಪರಿಣಮಿಸಿತ್ತು. ಇಲ್ಲಿ ಅನೇಕ ಧರ್ಮಪ್ರಚಾರ ಶಾಲೆಗಳು ಮತ್ತು ಪ್ರಸಿದ್ಧ ಶಿಕ್ಷಣಸಂಸ್ಥೆಗಳೂ ಇದ್ದುವು. ಇದು ಸರಿಯದ ನಾಲ್ಕು ಮಹಾನಗರಗಳಲ್ಲಿ ಒಂದಾಗಿತ್ತು. ಆಂಟಿಯೋಕ್, ಡಮಾಸ್ಕಸ್, ನಿಸಿಬಿಸ್ ಎಂಬಿವೇ ಉಳಿದ ಮೂರು ಮಹಾನಗರಗಳು. ಇಂದು ಇದು ಪ್ರಮುಖ ವ್ಯಾಪಾರಕೇಂದ್ರವಾಗಿದೆ. ಹತ್ತಿಬಟ್ಟೆಗಳು, ಚರ್ಮದ ವಸ್ತುಗಳು ಮತ್ತು ಚಿನ್ನದ ಆಭರಣಗಳ ತಯಾರಿಕೆಗೆ ಹೆಸರಾಗಿದೆ.

ಎಡೆಸ್ಸ ನಗರದ ಪಶ್ಚಿಮಭಾಗದ ಕಡಿದಾದ ಮುಮ್ಮೈ ಪ್ರದೇಶದಲ್ಲಿರುವ ಅಶ್ವಶಾಲೆಗಳು, ಇಬ್ರಾಹಿಮ್-ಆಲ್-ಖಲೀಲನ ಮಸೀದಿಯ ಒಳ ಆವರಣದಲ್ಲಿರುವ ಗೋಪುರ, ವಿಶೇಷವಾಗಿ ದಕ್ಷಿಣಭಾಗದಲ್ಲಿ ಕಾಣಬರುವ ಗೋಡೆಗಳು, ಅಣೆಕಟ್ಟು ಮತ್ತು ಜಸ್ಟೀನಿಯನ್ ಮಾಡಿಸಿದ ಬಂಡೆಗಳ ನಡುವಣ ತೋಡುದಾರಿಗಳು-ಇವೇ ಈ ಪ್ರಾಚೀನ ನಗರದ ಮುಖ್ಯ ಅವಶೇಷಗಳು.
ಅಶ್ವಶಾಲೆಯ ಪ್ರದೇಶದಲ್ಲಿ ನಿಂತು ನೋಡಿದರೆ ನಗರದ ವಿಹಂಗಮ ನೋಟ ದೊರೆಯುತ್ತದೆ. ಮಧ್ಯಯುಗದಲ್ಲಿ ಕಟ್ಟಿದವೆಂದು ಹೇಳಲಾಗಿರುವ ಈ ಅಶ್ವಶಾಲೆಗಳು ಇಂದೂ ಸುಸ್ಥಿತಿಯಲ್ಲಿವೆ. ಗೋಡೆಗಳು ಗಟ್ಟಿಯಾಗಿವೆ. ಬಂಡೆಯನ್ನು ಕೊರೆದು ನಿರ್ಮಿಸಿರುವ ಆಳವಾದ ಕಂದಕಗಳು ಇವುಗಳಿಗೆ ರಕ್ಷಣೆಯನ್ನೊದಗಿಸುತ್ತವೆ. ಕೋಟೆಯಲ್ಲಿರುವ ಎರಡು ಕಾರಿಂಥಿಯನ್ ಸ್ತಂಭಗಳು ನಗರದ ಅನೇಕ ಭಾಗಗಳಿಗೆ ಚೆನ್ನಾಗಿ ಕಾಣಿಸುತ್ತವೆ. ಇವು ಡಯೋಸ್‍ಕ್ಯೂರಿ ಪಂಥಕ್ಕೆ ಸಂಬಂಧಿಸಿದವುಗಳೆಂದು ಹೇಳಲಾಗಿದೆ. ಇವು ಬೃಹತ್ ಕವಣೆಯಂತ್ರದ ಬಾಹುಗಳಾಗಿದ್ದುವೆಂದೂ ಕ್ರೂರಿಯಾದ ನಿಮ್ರೋದ್ ಪ್ರವಾದಿ ಏಬ್ರಹಾಮನನ್ನು ಕೊಂದಿದ್ದು ಈ ಕವಣಿಯಂತ್ರದಿಂದಲೇ ಎಂದೂ ಹೇಳಲಾಗಿದೆ.

ಕೋಟೆಗೆ ಕೊಂಚದೂರದಲ್ಲಿ ಕಾಣುವ ಬೆಟ್ಟಗಳ ಬಳಿ ಅಸಂಖ್ಯಾತ ಗುಹೆಗಳಿವೆ. ಇವುಗಳ ಪ್ರವೇಶದ್ವಾರದಲ್ಲಿ ಅಲಂಕಾರ ಮಾಡಿರುವುದು ಕಂಡುಬರುತ್ತದೆ. ಇವು ಬಂಡೆಯಲ್ಲಿ ತುಂಬ ಒಳಕ್ಕೆ ಚಾಚಿಕೊಂಡಿದ್ದು, ಕೆಲವೆಡೆಗಳಲ್ಲಿ ನೀರಿನ ತೊಟ್ಟಿಗಳಿವೆ. ಒಂದು ಗುಹೆಯಲ್ಲಿ ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನದ್ದೆಂದು ಹೇಳಲಾಗಿರುವ ಸುಂದರವಾದ ಶಬಲ ಖಚಿತ ನೆಲೆಗಟ್ಟಿದೆ.

ಏಬ್ರಹಾಮ್ ಮಸೀದಿಯ ಒಳ ಆವರಣದಲ್ಲಿರುವ ಗೋಪುರ ಚದರಸ್ತಂಭವಾಗಿದ್ದು, ಸುಂದರವಾಗಿದೆ. ಇದು ಪವಿತ್ರ ಮೀನುಗಳ ಕೊಳದ ಬಳಿಯೇ ಇದೆ. ಇದು ಧರ್ಮಯುದ್ಧದ ಸ್ಮಾರಕವಾಗಿದ್ದಿರಬೇಕೆಂದು ಹೇಳಲಾಗಿದೆ. ನಗರದ ಗೋಡೆಗಳು ಜೀರ್ಣಾವಸ್ಥೆಯಲ್ಲಿವೆ. ಪಶ್ಚಿಮ ಮತ್ತು ನೈಋತ್ಯ ಭಾಗಗಳಲ್ಲಿ ಕೋಟೆ ಗೋಡೆಯ ಅವಿಚ್ಛಿನ್ನ ಸಾಲು ಮತ್ತು ದಿಡ್ಡಿಬಾಗಿಲು ಕಾಣದೊರೆಯುತ್ತವೆ. ಪ್ರವಾಹ ನಿಯಂತ್ರಣಕ್ಕಾಗಿ ಚಕ್ರವರ್ತಿ ಜಸ್ಟೀನಿಯನ್ ಕೈಗೊಂಡಿದ್ದ ಕಾರ್ಯಗಳ ಅವಶೇಷಗಳೇ ಎಡೆಸ್ಸದ ಅತ್ಯಂತ ಮುಖ್ಯ ಅವಶೇಷಗಳು. ಸ್ಕಿರ್ಟಸ್ ಝರಿ ಇಂದಿನ ಡೈಸಾನ್ ಎಡೆಸ್ಸಕ್ಕೆ ಜೀವವಾಹಿನಿಯಾಗಿತ್ತು. ನಗರಕ್ಕೆ ನಾಲ್ಕು ಮೈಲಿಗಳ ದೂರದಲ್ಲಿರುವ ಬಂಡೆಯ ಕೆಳಗಿರುವ ಆಳವಾದ ಕೊಳವೊಂದರಿಂದ ಇದು ಹುಟ್ಟಿಬರುತ್ತದೆ. ಆ ಬಂಡೆಯ ಮೇಲೆ ಒಂದು ಆರ್ಮೇನಿಯನ್ ಶಾಸನವೂ ಇದೆ. ಈ ಝರಿಯ ಸುಂದರ ಪ್ರವಾಹವೇ ಅಂಟಿಯೋಷಿಯ ಕಾಲಿರ್ಹೋಸ್ (ಸುಂದರ ಪ್ರವಾಹ) ಎಂಬ ಪರ್ಯಾಯನಾಮಕ್ಕೆ ಕಾರಣವಾಗಿದ್ದಿರಬೇಕು. ಇದರಲ್ಲಿ ಸಾಕಷ್ಟು ನೀರು ಹರಿಯುತ್ತಿರುತ್ತದೆಯಾದರೂ ಇದ್ದಕ್ಕಿದ್ದಂತೆಯೆ ಪ್ರವಾಹ ಉಕ್ಕಿಬರುವುದರಿಂದ ಈ ನಗರ ಅನೇಕ ಬಾರಿ ಕೊಚ್ಚಿಹೋಗಿದ್ದು ಉಂಟು. ಕ್ರಿ.ಶ. ಆರನೆಯ ಶತಮಾನದಲ್ಲಿ ಚಕ್ರವರ್ತಿ ಜಸ್ಟೀನಿಯನ್ ಪ್ರವಾಹ ನಿಯಂತ್ರಣಕ್ಕೆ ಬಂದೋಬಸ್ತು ಮಾಡಿದಂದಿನಿಂದ ಈ ಹಾವಳಿ ಇಲ್ಲವಾಗಿದೆ. ಇದಕ್ಕಾಗಿ ಆತ ನಗರವನ್ನು ನದಿ ಪ್ರವೇಶಿಸುವ ಸ್ಥಳದಲ್ಲಿ ಒಂದು ಸಣ್ಣ ಅಣೆಕಟ್ಟನ್ನು ನಿರ್ಮಿಸಿದ. ನಿವೇಶನದ ಪೂರ್ವಭಾಗದಲ್ಲಿ ಸುಮಾರು ನೂರು ಅಡಿ ಆಳವಿರುವ ಕಾಲುವೆಯನ್ನು ತೋಡಿಸಿ ಪ್ರವಾಹ ಕಾಲದ ಹೆಚ್ಚಿನ ನೀರು ಅದರ ಮೂಲಕ ಹೊರಹೋಗುವಂತೆ ಮಾಡಿದ.

ಎಡೆಸ್ಸದ ದಕ್ಷಿಣಭಾಗದಲ್ಲಿ ಬೆಲಿಖ್‍ನದಿಯ ಕಣಿವೆಯಿದೆ. ಎಡೆಸ್ಸಕ್ಕೆ ಸುಮಾರು 48 ಕಿ.ಮೀ. ದೂರದಲ್ಲಿರುವ ರಸ್ ಅಲ್-ಐನ್ ಅಲ್ ಅರುಸನ ಚಿಲುಮೆಯಿಂದ ಉದ್ಭವಿಸುವ ಈ ನದಿ ಪ್ರಾಚೀನ ಹರ್ರಾನ್ ನಗರಕ್ಕೆ ನೀರನ್ನೊದಗಿಸುತ್ತಿತ್ತು. ಎಡೆಸ್ಸ ಮೇಲ್ದಂಡೆ ಯೋಜನೆಯ ಅನಂತರ ಈ ನಗರ ಪತನಾಭಿಮುಖಿಯಾಯಿತು. ಇವುಗಳ ಅವಶೇಷಗಳು ನಗರದ ಇತಿಹಾಸಕ್ಕೆ ಸಾಕ್ಷಿಯಾಗಿವೆ.													
     (ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ